ಜೀವ ಸಂಕುಲದ ವಿಕಾಸದ ಶಕ್ತಿಯೇ ಸ್ವಾರ್ಥ, ಆ ಸ್ವಾರ್ಥ ಇಲ್ಲದಿದ್ದಲ್ಲಿ ನಮ್ಮ ಅಸ್ಥಿತ್ವವೇ ಇರುತ್ತಿರಲಿಲ್ಲ ಎಂದು ವಿಜ್ಞಾನ ಹೇಳಿದರೆ, ನಾವು ನಿಸ್ವಾರ್ಥದಿಂದ ಬಾಳಬೇಕು ಎಂದು ಧರ್ಮ ಮತ್ತು ಸಂಸ್ಕೃತಿ ಬೋದಿಸುತ್ತದೆ.
ಇವುಗಳಲ್ಲಿ ಯಾವುದು ಸರಿ?
ಮಾನವನಿಗೆ ಆಸೆಗಳೆ ಇಲ್ಲದಿದ್ದಲ್ಲಿ ನಮ್ಮ ಸಂಸ್ಕೃತಿಯೇ ಬೆಳೆಯುತ್ತಿರಲಿಲ್ಲ, ಯಾವ ಅವಿಷ್ಕಾರಗಳೂ ಉದ್ಭವವಾಗುತ್ತಿರಲಿಲ್ಲ. ಹಾಗಾಗಿ ಮಾನವನ ನಾಗರಿಕತೆಯನ್ನು ಮುನ್ನಡೆಸುತ್ತಿರುವುದೆ ಆಸೆ ಎಂದು ಕೆಲವರು ವಾದಿಸಿದರೆ, ಆಸೆಯೇ ದುಃಖಕ್ಕೆ ಕಾರಣ ಎಂದು ಬುದ್ದ ಎಚ್ಚರಿಸಿದ.
ಇವುಗಳಲ್ಲಿ ಯಾವುದು ಸತ್ಯ?
ಜಗತ್ತನ್ನು ಮತ್ತು ಅಲ್ಲಿನ ಜೀವವನ್ನು ಸೃಷ್ಟಿಸಿದ್ದೆ ದೇವರು ಎನ್ನುವುದು ಧಾರ್ಮಿಕ ನಂಬಿಕೆಯಾದರೆ, ವಿಕಾಸದ ಉನ್ನತಿಯನ್ನು ತಲುಪಿದ ಮಾನವನೆ ಬ್ರಹ್ಮಾಂಡದಾಧ್ಯಂತ ಎಲ್ಲೆಲ್ಲೂ ಜೀವವನ್ನು ಬಿತ್ತುತ್ತಿರಲು ಸಾಧ್ಯ. ಹಾಗಾಗಿ ವಿಕಾಸದ ತುಟ್ಟ ತುದಿ ತಲುಪಿದ ಮಾನವನೆ ನಾವು ನಂಬಿರುವ ‘ದೈವ’ ಎಂದು ಕೆಲವು ಚಿಂತಕರು ವಾದಿಸುತ್ತಾರೆ.
ಹಾಗಾದರೆ ದೇವರು ಎಂದರೆ ಯಾರು?
ಈ ಪ್ರಶ್ನೆಗಳ ಬೆನ್ನಟ್ಟಿ ಹೋಗುವ ಪ್ರಯತ್ನ ಈ ಕಾದಂಬರಿಯ ಪಾತ್ರಗಳಲ್ಲಿ ಕಾಣಬಹುದು.
ಎರಡನೆ ಬುದ್ದ ಎಂದೆ ಖ್ಯಾತಿಯಾಗಿರುವ ನಾಗಾರ್ಜುನ ಆಸೆಗಳನ್ನು ಹತ್ತಿಕ್ಕುವ ತಂತ್ರಗಾರಿಕೆಯನ್ನು ಸಿದ್ದಿಸಿಕೊಂಡಿದ್ದ. ಆ ತಂತ್ರದ ವಿವರಗಳು ಇತ್ತೀಚೆಗೆ ಚೀನಾದ ಆಡಳಿತದ ಕೈ ಸೇರಿ, ಅದರ ಕೆಲವೇ ಮಂದಿ ಇಡೀ ಪ್ರಪಂಚವನ್ನು ತಮ್ಮ ಅಧೀನಕ್ಕೆ ತಂದುಕೊಳ್ಳುವ ಯೋಜನೆಯೊಂದನ್ನು ರೂಪಿಸುತ್ತಾರೆ. ಆ ಯೋಜನೆಯ ರಹಸ್ಯವನ್ನು ಬೇದಿಸುವ ಕೆಲವು ವಿಜ್ಞಾನಿಗಳ ಮತ್ತು ಚಿಂತಕರ ನಡುವೆ ನಡೆಯುವ ಸಂಕೀರ್‍ಣ ಚರ್ಚೆಗಳು ಮತ್ತು ಆ ಯೋಜನೆಯನ್ನು ನಿಷ್ಕ್ರಿಯೆಗೊಳಿಸಲು ಅವರು ಕೈಗೊಳ್ಳುವ ಪ್ರಯತ್ನ ಈ ಕಥೆಯ ವಸ್ತು.