ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಚಂದ್ರಗುಪ್ತನು ತನ್ನ ಇಳಿವಯಸಿನಲ್ಲಿ ಜೈನ ಧರ್ಮವನ್ನು ಸ್ವೀಕರಿಸಿ, ಸಾವಿರಾರು ಜೈನ ಮುನಿಗಳ ಜೊತೆ ದಕ್ಷಿಣಕ್ಕೆ ಪ್ರಯಾಣ ಬೆಳೆಸುತ್ತಾನೆ- ತಾನು ಅಪ್ಪಿಕೊಂಡ ಜೈನ ಧರ್ಮದ ಪ್ರಚಾರಕ್ಕೆಂದು. ಆದರೆ ಈ ಪಯಣ ಕೇವಲ ತುಂಡು ಬಟ್ಟೆ ತೊಟ್ಟು ಬಿಕ್ಷೆ ಬೇಡಿ ಜೀವನ ಸಾಗಿಸುವ ಸನ್ಯಾಸಿಗಳ ಯಾತ್ರೆಯಾಗಿರಲಿಲ್ಲ. ಜೈನ ಧರ್ಮವನ್ನು ದಕ್ಷಿಣದಲ್ಲಿ ನೆಲೆಗೊಳಿಸಲು ಹಾಗೂ ಆ ಸಾವಿರಾರು ಜೈನ ಮುನಿಗಳನ್ನು ಪ್ರಚಾರದಲ್ಲಿ ತೊಡಗಿಸಲು ಬೇಕಾಗಿದ್ದ ಅಘಾದ ಸಂಪತ್ತನ್ನು ಚಕ್ರವರ್ತಿ ತನ್ನೊಂದಿಗೆ ಒಯ್ಯುತ್ತಾನೆ. ಸಾವಿರಾರು ಗಾವುದಗಳ ದೂರ, ಅಪರಿಚಿತ ಪ್ರದೇಶಗಳ ಮೂಲಕ ಹಾದುಹೋಗುವ ಈ ಪ್ರಯಾಣದಲ್ಲಿ ತಾವು ಹೊತ್ತು ಹೋಗುತ್ತಿರುವ ಸಂಪತ್ತಿಗೆ ಯಾವುದೇ ಕುಂದು ಬರದಂತೆ ಕಾಪಾಡಿಕೊಳ್ಳಲು, ಇಡೀ ಕಾರ್ಯಾಚರಣೆಯನ್ನು ಒಂದು ರಹಸ್ಯ ಯೋಜನೆಯಾಗಿ ರೂಪಿಸಲಾಗುತ್ತದೆ. ಕೊನೆಗೆ, ಶ್ರವಣಬೆಳಗೊಳದತ್ತ ಬಂದ ಈ ಸಂಪತ್ತು ಅಲ್ಲಿಯೂ ಕೂಡ ಹಲವು ರಹಸ್ಯ ಸೂತ್ರಗಳ ಕಕ್ಷೆಯೊಳಗೆ ರಕ್ಷಿಸಲ್ಪಡುತ್ತದೆ.
ಆ ರಹಸ್ಯ ರಕ್ಷಣಾ ಸೂತ್ರಗಳನ್ನು ಹೆಣೆದವರಾರು? ಆ ನಿಧಿ ಶ್ರವಣ ಬೆಳಗೊಳದಿಂದ ಎಲ್ಲಿ ಹೋಯಿತು? ಈ ವಿವರಗಳನ್ನು ಹುಡುಕಿಹೊರಟ ಒಬ್ಬ ಚರಿತ್ರೆಯ ವಿಧ್ಯಾರ್ಥಿನಿ ತನ್ನ ಹುಡುಕಾಟವನ್ನು ಎಡಿನ್ ಬರೋಗೆ ಕೊಂಡೊಯ್ಯುತ್ತಾಳೆ. ದುರದ್ಟುಷ್ಟವಶಾತ್, ಅಲ್ಲಿ ಅವಳು ಕಂಡುಕೊಂಡ ಸತ್ಯಗಳೇ ಅವಳಿಗೆ ಕಂಟಕಗಳಾಗುತ್ತವೆ. ಆಕೆಯ ಪ್ರಯತ್ನ ಫಲಿಸಿತೆ ಎನ್ನುವುದು ಕನಕ ಮುಸುಕು ತೆರೆದಾಗ ತಿಳಿಯುತ್ತದೆ.